ಲೋಕಾಯುಕ್ತರಿಗೆ ಪರಮಾಧಿಕಾರ: ಸರ್ವ ಪಕ್ಷ ಸಭೆ ವಿಫಲ
ನಾಯಕರಲ್ಲಿ ಮೂಡದ ಒಮ್ಮತ
ಬೆಂಗಳೂರು: ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಸಲುವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಕರೆದಿದ್ದ ಸರ್ವ ಪಕ್ಷಗಳ ಸಭೆ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ.
ಇಂದು ಬೆಳಿಗ್ಗೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ವಿಷಯದಲ್ಲಿ ನಿಖರ ನಿಲುವು ಪ್ರತಿಪಾದಿಸುವಲ್ಲಿ ವಿಫಲವಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿಪಕ್ಷಗಳ ನಾಯಕರ ಮಧ್ಯೆಯೇ ಈ ವಿಷಯದಲ್ಲಿ ಒಮ್ಮತ ಸಾಧ್ಯವಾಗಲಿಲ್ಲ. ಹೀಗಾಗಿ ಸಿದ್ಧರಾಮಯ್ಯ, ಹೆಚ್.ಡಿ.ರೇವಣ್ಣ ಹಾಗೂ ಎಂ.ಸಿ. ನಾಣಯ್ಯ ಅವರು ಲೋಕಾಯುಕ್ತರಿಗೆ ಪರಮಾಧಿಕಾರ ನೀಡಬೇಕು ಎಂದರೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕಿ ಮೋಟಮ್ಮ ಅದರ ಪರವಾಗಿರಲಿಲ್ಲ.
ರಾಜ್ಯದಲ್ಲಿ ಬೇರು ಬಿಟ್ಟಿತ್ತಿರುವ ಭ್ರಷ್ಟ ವ್ಯವಸ್ಥೆಯನ್ನು ಕಿತ್ತೊಗೆಯಲು ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರನ್ನು ಲೋಕಾಯುಕ್ತ ತನಿಖೆಯ ವ್ಯಾಪ್ತಿಗೊಳಪಡಿಸಬೇಕು ಎಂದು ಸಿದ್ಧರಾಮಯ್ಯ, ರೇವಣ್ಣ ಹಾಗೂ ನಾಣಯ್ಯ ಪ್ರತಿಪಾದಿಸಿದರು.
ಆದರೆ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕಿ ಮೋಟಮ್ಮ ಮಾತ್ರ, ಈ ಮಟ್ಟದ ಅಧಿಕಾರ ನೀಡುವುದು ಬೇಡ. ನಾಳೆ ಅದು ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂದು ಪ್ರತಿಪಾದಿಸಿದರು.
ಹೀಗಾಗಿ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಪ್ರತಿಪಕ್ಷಗಳ ನಡುವೆಯೇ ಒಮ್ಮತ ಮೂಡಲಿಲ್ಲ. ಹೀಗಾಗಿ ಈ ಸಭೆಯ ನಂತರ ಸಂಪುಟ ಸಭೆ ಕರೆದು ಚರ್ಚೆ ನಡೆಸಲುದ್ದೇಶಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಏಕಾಏಕಿಯಾಗಿ ಸಂಪುಟ ಸಭೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡರು.
ಉಪ ಲೋಕಾಯುಕ್ತ ನೇಮಕ
ಸಭೆಯ ನಂತರ ಸುದ್ಧಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಂದಿನ ಸಭೆಯಲ್ಲಿ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಸಂಬಂಧ ಪ್ರತಿಪಕ್ಷಗಳ ಸಲಹೆಯನ್ನು ಪಡೆದಿದ್ದೇವೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಸಧ್ಯದಲ್ಲೇ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಮುಂದಿನ ನಾಲ್ಕಾರು ದಿನಗಳಲ್ಲಿ ಉಪಲೋಕಾಯುಕ್ತರನ್ನು ನೇಮಕ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರ ಪ್ರಶ್ನಗೆ ಸ್ಪಷ್ಟಪಡಿಸಿದರು.
ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿ, ಲೋಕಾಯುಕ್ತರ ರಾಜೀನಾಮೆ ಹಿನ್ನೆಲೆಯಲ್ಲಿ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇಂದು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ನಮ್ಮ ಸಲಹೆಗಳನ್ನು ನೀಡಿದ್ದೇವೆ ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಹೀಗಾಗಿ ಅದನ್ನು ಕಿತ್ತೊಗೆಯಲು ಮುಖ್ಯಮಂತ್ರಿಗಳು, ಸಚಿವರು, ಶಾಸಕರನ್ನು ಲೋಕಾಯುಕ್ತ ತನಿಖೆ ವ್ಯಾಪ್ತಿಯೊಳಗೆ ತನ್ನಿ ಎಂದು ಹೇಳಿದ್ದೇವೆ.
ಮುಖ್ಯ ಮಂತ್ರಿಗಳು ಎಲ್ಲ ಸಲಹೆಯನ್ನು ಕೇಳಿ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವ ಸಂಬಂಧ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಹೇಳಿದ್ದಾರೆ.
ಆದರೆ, ಇದೆಲ್ಲ ಒಂದು ಸಭೆಯಲ್ಲಿ ಇತ್ಯರ್ಥ ವಾಗುವಂತದಲ್ಲ. ಪುನ: ಇಂತಹ ಸಭೆ ನಡೆಯಬೇಕಾಗುತ್ತದೆ.ನಂತರ ಮುಂದಿನ ತೀರ್ಮಾನ ತೆಗೆದು ಕೊಳ್ಳಬೇಕಾಗುತ್ತದೆ ಎಂದು ಹೇಳಿದರು.